ನಿಮ್ಮ CIBIL SCORE ಹೆಚ್ಚಿಸಿಕೊಳ್ಳಬೇಕಾ ? ಇಲ್ಲಿವೆ 10 ಸರಳ ಉಪಾಯಗಳು

Share this post

ನೀವು ಬ್ಯಾಂಕ್‌ನಲ್ಲಿ ಸಾಲ ಕೇಳಲು ಹೋದಾಗ ಮೊದಲು ಏನೆಲ್ಲಾ ನೋಡುತ್ತಾರೆ ಗೊತ್ತಾ? ನಿಮ್ಮ ಆದಾಯ ಎಷ್ಟಿದೆ, ಈಗಾಗಲೇ ಬೇರೆ ಸಾಲ ಏನಾದರೂ ಇದೆಯಾ, ತಗೊಂಡ ಸಾಲವನ್ನು ಸರಿಯಾಗಿ ಕಟ್ಟಿದ್ದೀರಾ ಅನ್ನೋದನ್ನೆಲ್ಲಾ ಪರಿಶೀಲನೆ ಮಾಡುತ್ತಾರೆ. ಇದರ ಜೊತೆಗೆ ನಿಮ್ಮ CIBIL ಸ್ಕೋರ್ ಕೂಡ ನೋಡಬಹುದು.

ಇವತ್ತು ಬೈಕ್ ತಗೊಳ್ಳಬೇಕು ಅಂದ್ರೂ ಸಾಲ ಬೇಕು, ಮನೆ ಕಟ್ಟಬೇಕು ಅಂದ್ರೂ ಸಾಲ ಬೇಕು. ಕೆಲವೊಮ್ಮೆ ತುರ್ತಾಗಿ ಹಣ ಬೇಕಾದಾಗ ಪರ್ಸನಲ್ ಲೋನ್‌ಗೂ ಅರ್ಜಿ ಹಾಕಬೇಕಾಗುತ್ತೆ. ಇಂಥ ಸಮಯದಲ್ಲಿ CIBIL ಸ್ಕೋರ್ ಚೆನ್ನಾಗಿದ್ದರೆ ಅನುಕೂಲವಾಗಬಹುದು.

increse cibil score ideas
how to increase your cibil score

ಆದರೆ ಸ್ಕೋರ್ ಕಡಿಮೆ ಇದೆ ಅಂದ ತಕ್ಷಣ ಹೆದರಬೇಕಾಗಿಲ್ಲ. ಮೊದಲು ಅದು ಯಾಕೆ ಕಡಿಮೆಯಾಗಿದೆ ಅನ್ನೋದನ್ನ ತಿಳಿದುಕೊಳ್ಳಬೇಕು. ಆಮೇಲೆ ಒಂದೊಂದೇ ತಪ್ಪು ಸರಿಪಡಿಸಿಕೊಳ್ಳಬೇಕು.

ಹಾಗಾದರೆ CIBIL ಸ್ಕೋರ್ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಬನ್ನಿ, ಸರಳವಾಗಿ ತಿಳಿದುಕೊಳ್ಳೋಣ.

ಇದನ್ನೂ ಓದಿ : ಸಾಲಗಾರ ಸತ್ತರೆ ಬ್ಯಾಂಕ್ ಸಾಲ ಏನಾಗುತ್ತದೆ? ಕುಟುಂಬದವರು ಹಣ ಕಟ್ಟಬೇಕಾ?

CIBIL ಸ್ಕೋರ್ ಅಂದ್ರೆ ಏನು?

ಸರಳವಾಗಿ ಹೇಳಬೇಕೆಂದರೆ, ನೀವು ಈ ಹಿಂದೆ ಸಾಲ ತಗೊಂಡಿದ್ದರೆ ಅದನ್ನ ಹೇಗೆ ವಾಪಸ್ ಕಟ್ಟಿದ್ದೀರಿ ಅನ್ನೋದನ್ನ ತಿಳಿದುಕೊಳ್ಳಲು ಸಹಾಯ ಮಾಡುವ ಅಂಕವೇ CIBIL ಸ್ಕೋರ್.

ಈ ಸ್ಕೋರ್ ಸಾಮಾನ್ಯವಾಗಿ 300ರಿಂದ 900ರ ವರೆಗೆ ಇರುತ್ತೆ. ಸ್ಕೋರ್ ಹೆಚ್ಚಿದ್ದರೆ ನಿಮ್ಮ ಕ್ರೆಡಿಟ್ ಇತಿಹಾಸ ಚೆನ್ನಾಗಿದೆ ಅನ್ನೋದಕ್ಕೆ ಒಂದು ಸೂಚನೆಯಾಗಬಹುದು.

ಸಾಮಾನ್ಯವಾಗಿ 750ಕ್ಕಿಂತ ಹೆಚ್ಚಿನ ಸ್ಕೋರ್ ಇದ್ದರೆ ಸಾಲ ಪಡೆಯುವಾಗ ಅನುಕೂಲವಾಗಬಹುದು. ಆದರೆ ಸ್ಕೋರ್ ಚೆನ್ನಾಗಿದೆ ಅಂತಾ ಬ್ಯಾಂಕ್ ಸಾಲ ಕೊಡಲೇಬೇಕು ಅಂತೇನಿಲ್ಲ. ನಿಮ್ಮ ಆದಾಯ, ಕೆಲಸ, ಈಗಾಗಲೇ ಇರುವ ಸಾಲ ಮತ್ತು ಬ್ಯಾಂಕಿನ ನಿಯಮಗಳನ್ನೂ ನೋಡುತ್ತಾರೆ.

ಕರ್ನಾಟಕದ ರೈತರಿಗೆ ₹2,500 ಬರ ಪರಿಹಾರ: ಮೊದಲ ಕಂತಿನ ಹಣ ಯಾವಾಗ ಖಾತೆಗೆ ಬರುತ್ತೆ? ಯಾರಿಗೆ ಸಿಗುತ್ತೆ?

1. EMI ಕಟ್ಟೋದನ್ನ ಮಾತ್ರ ಮರೆಯಬೇಡಿ!

ನೀವು ಬೈಕ್ ಸಾಲ ತಗೊಂಡಿದ್ದೀರಾ, ಕಾರ್ ಲೋನ್ ಇದೆಯಾ ಅಥವಾ ಬೇರೆ ಯಾವುದಾದರೂ ಸಾಲ ಇದೆಯಾ? ಹಾಗಾದರೆ ಪ್ರತಿ ತಿಂಗಳು ಕಟ್ಟಬೇಕಾದ ಕಂತನ್ನ ಸರಿಯಾದ ಸಮಯಕ್ಕೆ ಕಟ್ಟುವ ಅಭ್ಯಾಸ ಮಾಡಿಕೊಳ್ಳಿ.

ಉದಾಹರಣೆಗೆ, ನಿಮ್ಮ EMI ಕಟ್ಟುವ ಕೊನೆಯ ದಿನಾಂಕ 10ನೇ ತಾರೀಖು ಅಂತಾ ಇಟ್ಕೊಳ್ಳಿ. ಆ ದಿನ ಹಣ ಹೊಂದಿಸೋಣ ಅಂತಾ ಕಾಯಬೇಡಿ. ಸಾಧ್ಯವಾದರೆ ಮೊದಲೇ ಹಣದ ವ್ಯವಸ್ಥೆ ಮಾಡಿಟ್ಟುಕೊಳ್ಳಿ.

ಯಾಕಂದ್ರೆ ಕಂತು ಕಟ್ಟುವುದು ಪದೇಪದೆ ತಡವಾದರೆ ನಿಮ್ಮ CIBIL ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ.

ಒಂದು ಸಣ್ಣ ಉಪಾಯ ಏನಂದ್ರೆ, ನಿಮ್ಮ ಮೊಬೈಲ್‌ನಲ್ಲಿ EMI ಕಟ್ಟುವ ದಿನಾಂಕಕ್ಕೆ ರಿಮೈಂಡರ್ ಇಟ್ಕೊಳ್ಳಿ. ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇಟ್ಟುಕೊಳ್ಳಿ. ಇದರಿಂದ ಕಂತು ಕಟ್ಟೋದನ್ನ ಮರೆಯುವ ಸಾಧ್ಯತೆ ಕಡಿಮೆಯಾಗುತ್ತೆ.

2. ಕ್ರೆಡಿಟ್ ಕಾರ್ಡ್ ಬಿಲ್ ಬಾಕಿ ಇಡಬೇಡಿ

ಇತ್ತೀಚೆಗೆ ಹಲವರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಆನ್‌ಲೈನ್‌ನಲ್ಲಿ ವಸ್ತು ಖರೀದಿ ಮಾಡೋದರಿಂದ ಹಿಡಿದು ಆಸ್ಪತ್ರೆ ಖರ್ಚಿನವರೆಗೂ ಕೆಲವೊಮ್ಮೆ ಕಾರ್ಡ್ ಉಪಯೋಗಕ್ಕೆ ಬರುತ್ತೆ.

ಆದರೆ ಕಾರ್ಡ್ ಬಳಸಿದ ಮೇಲೆ ಬಿಲ್ ಕಟ್ಟುವ ಜವಾಬ್ದಾರಿಯೂ ನಮ್ಮದೇ ಅಲ್ವಾ?

ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಬಂದಾಗ ಸಾಧ್ಯವಾದರೆ ಪೂರ್ತಿ ಹಣ ಪಾವತಿ ಮಾಡಿ. ಕನಿಷ್ಠ ಮೊತ್ತ ಕಟ್ಟಿದರೆ ಸಾಕು ಅಂತಾ ಸುಮ್ಮನಾಗಬೇಡಿ. ಉಳಿದ ಹಣದ ಮೇಲೆ ಬಡ್ಡಿ ಮತ್ತು ಇತರ ಶುಲ್ಕಗಳು ಬೀಳಬಹುದು.

ಒಂದು ವೇಳೆ ನೀವು ಕಾರ್ಡ್‌ನಲ್ಲಿ ಖರ್ಚು ಮಾಡಿದ ಹಣವನ್ನ ವಾಪಸ್ ಕಟ್ಟಲು ಆಗದ ಪರಿಸ್ಥಿತಿ ಇದ್ದರೆ, ಮುಂದಿನ ದಿನಗಳಲ್ಲಿ ಅದರ ಬಳಕೆಯನ್ನು ಕಡಿಮೆ ಮಾಡಿಕೊಳ್ಳಿ.

ನೆನಪಿರಲಿ, ಕೈಯಲ್ಲಿ ಹಣ ಇಲ್ಲದಿದ್ದರೂ ಕಾರ್ಡ್ ಇದೆ ಅಂತಾ ಮನಬಂದಂತೆ ಖರ್ಚು ಮಾಡೋದು ಒಳ್ಳೆಯ ಅಭ್ಯಾಸವಲ್ಲ.

3. ಕಾರ್ಡ್ ಮಿತಿ ಇದೆ ಅಂತಾ ಪೂರ್ತಿ ಖರ್ಚು ಮಾಡಬೇಡಿ

ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ₹50,000 ಇದೆ ಅಂತಾ ಇಟ್ಕೊಳ್ಳಿ. ಹಾಗಂತ ಪ್ರತಿತಿಂಗಳೂ ₹45,000 ಅಥವಾ ₹48,000 ಖರ್ಚು ಮಾಡಬೇಕೆಂದಿಲ್ಲ.

ನಿಮಗೆ ಎಷ್ಟು ಹಣ ಮರುಪಾವತಿ ಮಾಡಲು ಸಾಧ್ಯವಿದೆಯೋ ಅಷ್ಟೇ ಖರ್ಚು ಮಾಡುವುದು ಒಳ್ಳೆಯದು.

ಕಾರ್ಡ್ ಮಿತಿಯಲ್ಲಿ ಎಷ್ಟು ಭಾಗ ಬಳಸುತ್ತಿದ್ದೀರಿ ಅನ್ನೋದಕ್ಕೂ ಕ್ರೆಡಿಟ್ ಸ್ಕೋರ್ ಲೆಕ್ಕಾಚಾರದಲ್ಲಿ ಮಹತ್ವ ಇರಬಹುದು. ಇದನ್ನೇ Credit Utilization ಅಂತಾ ಕರೆಯುತ್ತಾರೆ.

ಸಾಮಾನ್ಯವಾಗಿ ಕಾರ್ಡ್ ಮಿತಿಯ ಶೇಕಡಾ 30ಕ್ಕಿಂತ ಕಡಿಮೆ ಬಳಸುವ ಗುರಿ ಇಟ್ಟುಕೊಳ್ಳಬಹುದು. ಆದರೆ ಇದೊಂದೇ ಸ್ಕೋರ್ ನಿರ್ಧರಿಸುವ ಅಂಶವಲ್ಲ.

ನಿಮ್ಮ ಕಾರ್ಡ್ ಮಿತಿ ₹50,000 ಇದ್ದರೆ, ಅಗತ್ಯವಿಲ್ಲದ ಖರ್ಚುಗಳನ್ನು ಕಡಿಮೆ ಮಾಡಿ. ಖರ್ಚು ಮಾಡಿದ ಹಣವನ್ನ ಸಮಯಕ್ಕೆ ಸರಿಯಾಗಿ ಕಟ್ಟುವ ಅಭ್ಯಾಸ ಮಾಡಿಕೊಳ್ಳಿ.

4. ಎಲ್ಲ ಬ್ಯಾಂಕ್‌ಗಳಲ್ಲೂ ಸಾಲಕ್ಕೆ ಅರ್ಜಿ ಹಾಕಬೇಡಿ

ಕೆಲವರಿಗೆ ಸಾಲ ಬೇಕಾದಾಗ ಒಂದೇ ಸಲ ನಾಲ್ಕೈದು ಬ್ಯಾಂಕ್‌ಗಳಲ್ಲಿ ಅರ್ಜಿ ಹಾಕುವ ಅಭ್ಯಾಸ ಇರುತ್ತೆ.

ಯಾವ ಬ್ಯಾಂಕ್ ಸಾಲ ಕೊಡುತ್ತೋ ನೋಡೋಣ ಅಂತಾ ಎಲ್ಲ ಕಡೆ ಅರ್ಜಿ ಹಾಕಿದರೆ, ಸಾಲದಾತರು ನಿಮ್ಮ ಕ್ರೆಡಿಟ್ ವರದಿಯನ್ನು ಪರಿಶೀಲಿಸಬಹುದು. ಇಂಥ ಪರಿಶೀಲನೆಗಳನ್ನು Hard Inquiry ಅಂತಾ ಕರೆಯುತ್ತಾರೆ.

ಕಡಿಮೆ ಅವಧಿಯಲ್ಲಿ ಹೆಚ್ಚು Hard Inquiryಗಳು ದಾಖಲಾಗುವುದು ಸ್ಕೋರ್ ಮೇಲೆ ಪರಿಣಾಮ ಬೀರಬಹುದು.

ಹಾಗಾಗಿ ಮೊದಲು ಯಾವ ಬ್ಯಾಂಕ್‌ನಲ್ಲಿ ಸಾಲ ಪಡೆಯುವುದು ಸೂಕ್ತ ಅನ್ನೋದನ್ನ ತಿಳಿದುಕೊಳ್ಳಿ. ಬಡ್ಡಿದರ, ಸಾಲದ ನಿಯಮಗಳು ಮತ್ತು ನಿಮ್ಮ ಅರ್ಹತೆ ಪರಿಶೀಲಿಸಿ. ಆಮೇಲೆ ಅರ್ಜಿ ಸಲ್ಲಿಸಿ.

5. ನಿಮ್ಮ ಹೆಸರಿನಲ್ಲಿ ಯಾವ ಸಾಲಗಳಿವೆ ಅಂತಾ ಒಮ್ಮೆ ನೋಡಿ

ನಿಮ್ಮ CIBIL ವರದಿಯನ್ನ ಕೊನೆಯ ಬಾರಿ ಯಾವಾಗ ಪರಿಶೀಲಿಸಿದ್ದೀರಿ?

ಕೆಲವರು ಸಾಲ ತೆಗೆದುಕೊಂಡು EMI ಕಟ್ಟುತ್ತಿರುತ್ತಾರೆ. ಆದರೆ ತಮ್ಮ ಕ್ರೆಡಿಟ್ ವರದಿಯಲ್ಲಿ ಏನು ದಾಖಲಾಗಿದೆ ಅನ್ನೋದನ್ನ ಗಮನಿಸುವುದೇ ಇಲ್ಲ.

ಒಮ್ಮೆ ವರದಿ ಪರಿಶೀಲಿಸಿದರೆ ನಿಮ್ಮ ಹೆಸರಿನಲ್ಲಿ ಯಾವ ಸಾಲಗಳಿವೆ, ಯಾವುದಾದರೂ ಬಾಕಿ ತೋರಿಸುತ್ತಿದೆಯಾ, ಪಾವತಿ ವಿವರ ಸರಿಯಾಗಿದೆಯಾ ಅನ್ನೋದನ್ನ ತಿಳಿದುಕೊಳ್ಳಬಹುದು.

ನೀವು ಈಗಾಗಲೇ ಸಾಲ ತೀರಿಸಿದ್ದರೂ ವರದಿಯಲ್ಲಿ ಬಾಕಿ ಇರುವಂತೆ ತೋರಿಸುತ್ತಿದ್ದರೆ, ಸಂಬಂಧಪಟ್ಟ ಬ್ಯಾಂಕ್‌ಗೆ ತಿಳಿಸಿ. ದಾಖಲೆಗಳಲ್ಲಿ ತಪ್ಪಿದ್ದರೆ ಅದನ್ನು ಸರಿಪಡಿಸಲು ದೂರು ಸಲ್ಲಿಸಿ.

ನಿಮ್ಮ CIBIL ವರದಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು:

https://www.cibil.com/

ಅರ್ಹ ಗ್ರಾಹಕರಿಗೆ ವರ್ಷಕ್ಕೊಮ್ಮೆ ಉಚಿತ ಪೂರ್ಣ ಕ್ರೆಡಿಟ್ ವರದಿ ಪಡೆಯುವ ಅವಕಾಶವಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತುತ ನಿಯಮಗಳನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಿಕೊಳ್ಳಿ.

6. ಸಾಲ ತೀರಿಸಿದ ಮೇಲೆ ದಾಖಲೆಗಳನ್ನ ಇಟ್ಟುಕೊಳ್ಳಿ

ನೀವು ತೆಗೆದುಕೊಂಡ ಸಾಲದ ಕೊನೆಯ ಕಂತನ್ನೂ ಕಟ್ಟಿದ್ದೀರಿ ಅಂತಾ ಇಟ್ಕೊಳ್ಳಿ. ಅಷ್ಟಕ್ಕೇ ನಿಮ್ಮ ಕೆಲಸ ಮುಗಿಯಿತು ಅಂತಾ ಅಂದುಕೊಳ್ಳಬೇಡಿ.

ಸಾಲದಾತರಿಂದ ಸಾಲ ಮುಕ್ತಾಯದ ದಾಖಲೆ ಪಡೆದುಕೊಳ್ಳಿ. ಅಗತ್ಯವಿದ್ದರೆ No Dues Certificate ಕೂಡ ಕೇಳಿ.

ಆಮೇಲೆ ನಿಮ್ಮ ಕ್ರೆಡಿಟ್ ವರದಿಯಲ್ಲಿ ಸಾಲದ ಸ್ಥಿತಿ ಸರಿಯಾಗಿ ಬದಲಾಗಿದೆಯಾ ಅನ್ನೋದನ್ನ ಪರಿಶೀಲಿಸಿ.

ಕೆಲವೊಮ್ಮೆ ಮಾಹಿತಿ ನವೀಕರಣಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಸಾಲ ತೀರಿಸಿದ ತಕ್ಷಣವೇ CIBIL ಸ್ಕೋರ್ ಹೆಚ್ಚಾಗಬೇಕು ಅಂತೇನಿಲ್ಲ.

7. ಸಾಲದ ಮೊತ್ತ ಕಡಿಮೆ ಮಾಡಿ ಮುಗಿಸುವ ಮುನ್ನ ಯೋಚಿಸಿ

ನಿಮ್ಮ ಸಾಲದ ಸಂಪೂರ್ಣ ಹಣ ಕಟ್ಟಲು ಆಗುತ್ತಿಲ್ಲ ಅಂತಾ ಬ್ಯಾಂಕ್ ಜೊತೆ ಮಾತಾಡಿ ಕಡಿಮೆ ಮೊತ್ತ ಪಾವತಿಸಿ ಸಾಲ ಮುಗಿಸುವ ಅವಕಾಶ ಕೇಳಬಹುದು.

ಆದರೆ ಹೀಗೆ ಮಾಡುವ ಮೊದಲು ಅದರ ಪರಿಣಾಮ ತಿಳಿದುಕೊಳ್ಳುವುದು ಮುಖ್ಯ ಆಗಿರುತ್ತದೆ.

ಕೆಲವು ಸಂದರ್ಭಗಳಲ್ಲಿ ಸಾಲದಾತರು ಒಪ್ಪಿಕೊಂಡ ಕಡಿಮೆ ಮೊತ್ತ ಪಾವತಿಸಿದರೆ, ಕ್ರೆಡಿಟ್ ವರದಿಯಲ್ಲಿ ಸಾಲದ ಸ್ಥಿತಿ Settled ಅಂತಾ ದಾಖಲಾಗಬಹುದು. ಇದರಿಂದ ಮುಂದೆ ಸಾಲ ಪಡೆಯುವಾಗ ಸಮಸ್ಯೆಯಾಗುವ ಸಾಧ್ಯತೆಯಿದೆ.

ಹಾಗಾಗಿ ಸಾಲದ ಸಂಪೂರ್ಣ ಮೊತ್ತ ಪಾವತಿಸಲು ಸಾಧ್ಯವಿದ್ದರೆ ಆ ಆಯ್ಕೆಯನ್ನು ಮೊದಲು ಪರಿಗಣಿಸಿ. ಈಗಾಗಲೇ ಸೆಟಲ್ ಮಾಡಿದ್ದರೆ, ನಿಮ್ಮ ವರದಿಯನ್ನು ಪರಿಶೀಲಿಸಿ ಮುಂದೇನು ಮಾಡಬಹುದು ಅಂತಾ ಬ್ಯಾಂಕ್ ಜೊತೆ ಚರ್ಚಿಸಿ.

8. ಈವರೆಗೆ ಸಾಲ ತಗೊಂಡಿಲ್ಲ ಅಂದ್ರೆ?

ನೀವು ಈವರೆಗೆ ಸಾಲವನ್ನೇ ತಗೊಂಡಿಲ್ಲ, ಕ್ರೆಡಿಟ್ ಕಾರ್ಡ್ ಕೂಡ ಬಳಸಿಲ್ಲ ಅಂದರೆ ನಿಮ್ಮ ಕ್ರೆಡಿಟ್ ಇತಿಹಾಸ ಕಡಿಮೆ ಇರಬಹುದು.

ಅಂತಹವರಿಗೆ ಸ್ಕೋರ್ ಲಭ್ಯವಿಲ್ಲದಿರುವ ಸಾಧ್ಯತೆಯೂ ಇದೆ.

ಇದಕ್ಕಾಗಿ ಸುಮ್ಮನೆ ಸಾಲ ತಗೊಳ್ಳುವ ಅವಶ್ಯಕತೆ ಇಲ್ಲ. ನಿಮಗೆ ನಿಜವಾಗಿಯೂ ಕ್ರೆಡಿಟ್ ಕಾರ್ಡ್ ಅಥವಾ ಸಾಲದ ಅಗತ್ಯವಿದ್ದರೆ ಮಾತ್ರ ಅದರ ಬಗ್ಗೆ ಯೋಚಿಸಿ.

ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ, ನಿಮಗೆ ಮರುಪಾವತಿ ಮಾಡಲು ಸಾಧ್ಯವಿರುವಷ್ಟೇ ಖರ್ಚು ಮಾಡಿ. ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಕಟ್ಟುವುದನ್ನ ಮರೆಯಬೇಡಿ.

9. ಬೇರೆಯವರಿಗೆ ಗ್ಯಾರಂಟಿ ಕೊಡುವಾಗ ಎಚ್ಚರ!

ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಸಾಲ ತೆಗೆದುಕೊಳ್ಳುವಾಗ ನಿಮಗೆ ಗ್ಯಾರಂಟಿ ಕೊಡಿ ಅಂತಾ ಕೇಳಬಹುದು.

ಪರಿಚಯದವರು ಅಂತಾ ಯೋಚಿಸದೆ ಗ್ಯಾರಂಟಿ ಕೊಡಬೇಡಿ. ಯಾಕಂದ್ರೆ ಕೆಲವು ಸಂದರ್ಭಗಳಲ್ಲಿ ಸಾಲಗಾರರು ಕಂತು ಕಟ್ಟದಿದ್ದರೆ, ಗ್ಯಾರಂಟಿದಾರರ ಮೇಲೂ ಜವಾಬ್ದಾರಿ ಬರಬಹುದು. ಜಂಟಿ ಸಾಲದ ವಿಚಾರದಲ್ಲೂ ಮರುಪಾವತಿ ಸಮಸ್ಯೆಗಳು ನಿಮ್ಮ ಕ್ರೆಡಿಟ್ ವರದಿಯ ಮೇಲೆ ಪರಿಣಾಮ ಬೀರಬಹುದು.

ಹಾಗಾಗಿ ಯಾರಿಗಾದರೂ ಗ್ಯಾರಂಟಿ ( guarantee )ಕೊಡುವ ಮುನ್ನ ಸಾಲದ ( loan rules )ನಿಯಮಗಳನ್ನ ಸರಿಯಾಗಿ ತಿಳಿದುಕೊಳ್ಳಿ.

10. ಹಣ ಕೊಟ್ಟರೆ ಸ್ಕೋರ್ ಹೆಚ್ಚಿಸುತ್ತೇವೆ ಅನ್ನೋರನ್ನ ನಂಬಬೇಡಿ

ನಿಮ್ಮ CIBIL ಸ್ಕೋರ್ ಕಡಿಮೆಯಿದೆ ಅಂತಾ ಯಾರಾದರೂ ಹಣ ಕೊಡಿ, ತಕ್ಷಣ 800 ಮಾಡಿಕೊಡುತ್ತೇವೆ ಅಂದ್ರೆ ಎಚ್ಚರವಾಗಿರಿ.

ನಿಜವಾಗಿಯೂ ವರದಿಯಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಲು ಅಧಿಕೃತವಾಗಿ ದೂರು ಸಲ್ಲಿಸಬಹುದು. ಆದರೆ ಹಣ ಕೊಟ್ಟ ತಕ್ಷಣ ಸ್ಕೋರ್ ಹೆಚ್ಚಾಗುತ್ತದೆ ಅನ್ನೋದಕ್ಕೆ ಖಾತರಿ ಇಲ್ಲ.

ನಿಮ್ಮ ಸಾಲದ ಇತಿಹಾಸ, ಮರುಪಾವತಿ ದಾಖಲೆ ಮತ್ತು ವರದಿಯಲ್ಲಿರುವ ಮಾಹಿತಿ ಸರಿಯಾಗಿರುವುದು ಮುಖ್ಯ.

CIBIL ಸ್ಕೋರ್ ಹೆಚ್ಚಾಗಲು ಎಷ್ಟು ದಿನ ಬೇಕು?

ಇದಕ್ಕೆ ಇಷ್ಟು ದಿನ ಅಂತಾ ನಿಖರವಾಗಿ ಹೇಳಲು ಆಗುವುದಿಲ್ಲ.

ನಿಮ್ಮ ಸ್ಕೋರ್ ಯಾಕೆ ಕಡಿಮೆಯಾಗಿದೆ, ಹಿಂದೆ ಎಷ್ಟು ಕಂತುಗಳು ಬಾಕಿ ಉಳಿದಿವೆ, ಈಗ ಸಾಲವನ್ನು ಸರಿಯಾಗಿ ಕಟ್ಟುತ್ತಿದ್ದೀರಾ ಅನ್ನೋದರ ಮೇಲೆ ಸುಧಾರಣೆ ಅವಲಂಬಿತವಾಗಿರುತ್ತದೆ.

ಕೆಲವರಿಗೆ ವರದಿ ನವೀಕರಣದ ನಂತರ ಬದಲಾವಣೆ ಕಾಣಿಸಬಹುದು. ಇನ್ನು ಕೆಲವರಿಗೆ ಹೆಚ್ಚು ಸಮಯ ಬೇಕಾಗಬಹುದು.

ಆದ್ದರಿಂದ ಇವತ್ತು ಸ್ಕೋರ್ ಕಡಿಮೆಯಿದೆ ಅಂತಾ ನಾಳೆಯೇ ಹೆಚ್ಚಾಗಬೇಕು ಎಂದು ನಿರೀಕ್ಷಿಸಬೇಡಿ. ನಿಮ್ಮ ಹಣಕಾಸಿನ ( money ) ಅಭ್ಯಾಸಗಳನ್ನ ಸರಿಪಡಿಸಿಕೊಳ್ಳಿ.

ಕೊನೆಯದಾಗಿ ಒಂದು ಮಾತು

ನಿಮ್ಮ CIBIL ಸ್ಕೋರ್ ಚೆನ್ನಾಗಿರಬೇಕು ಅಂದರೆ ದೊಡ್ಡ ಸಂಬಳವೇ ಬರಬೇಕು ಅಂತೇನಿಲ್ಲ. ನಿಮ್ಮ ಆದಾಯಕ್ಕೆ ( income )ತಕ್ಕಂತೆ ಖರ್ಚು ಮಾಡುವುದು, ತಗೊಂಡ ಸಾಲವನ್ನು ಸರಿಯಾಗಿ ಕಟ್ಟುವುದು ಮತ್ತು ಅನಗತ್ಯ ಸಾಲಗಳಿಂದ ದೂರ ಇರೋದು ಮುಖ್ಯ.

ನೀವು ಈಗಾಗಲೇ ಸಾಲ ತಗೊಂಡಿದ್ದರೆ, ಮೊದಲು ನಿಮ್ಮ EMI ಮತ್ತು ಕ್ರೆಡಿಟ್ ಕಾರ್ಡ್ ( creditcard ) ಬಿಲ್‌ಗಳನ್ನ ಸಮಯಕ್ಕೆ ಸರಿಯಾಗಿ ಪಾವತಿಸಲು ಶುರು ಮಾಡಿ. ನಂತರ ನಿಮ್ಮ ಕ್ರೆಡಿಟ್ ವರದಿಯನ್ನು ( credit report ) ಪರಿಶೀಲಿಸಿ. ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳಿ.

ಈ ಸಣ್ಣ ಸಣ್ಣ ಅಭ್ಯಾಸಗಳು ನಿಮ್ಮ ಕ್ರೆಡಿಟ್ ಇತಿಹಾಸ credit history ಸುಧಾರಿಸಿಕೊಳ್ಳಲು ಸಹಾಯ ಮಾಡಬಹುದು.

ಗಮನಿಸಿ: ಈ ಲೇಖನ ಕೇವಲ ಮಾಹಿತಿ ನೀಡಲು ಮಾತ್ರ. ಸಾಲ ಪಡೆಯುವ ಮುಂಚೆ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಗಮನಿಸಿ, ಅಗತ್ಯ ಇರುವಂತ ಸಂಬಂಧಪಟ್ಟ ಬ್ಯಾಂಕ್‌ನಿಂದ ಮಾಹಿತಿ ಪಡೆದುಕೊಳ್ಳಿರಿ.

ನಿಮ್ಮ cibil score ಎಷ್ಟಿದೆ ಅಂತಾ ತಿಳಿಯಲು ಅಧ್ನಕೃತ ಜಾಲತಾಣ ಭೇಟಿ ಮಾಡಿ.

https://www.cibil.com/


Share this post
error: Content is protected !!